ಅಡ್ಜುಟೆಂಟ್ ಹಕ್ಕಿ
	
ಆಫ್ರಿಕ ಮತ್ತು ಏಷ್ಯ ಖಂಡಗಳ ಕೊಕ್ಕರೆಗಳಲ್ಲಿ ಅತ್ಯಂತ ದೊಡ್ಡದೂ   ವಿಕಾರವೂ ಆಗಿರುವ ಪಕ್ಷಿ.  ತಲೆ ನುಣ್ಣಗಿದೆ. ಕೊಕ್ಕು ತುಂಬ ದೊಡ್ಡದು; ಕತ್ತಿನ ಕೆಳಭಾಗದಲ್ಲಿ ಒಂದು ಚೀಲ ನೇತಾಡುತ್ತದೆ. ಮಿಲಿಟರಿ ಅಧಿಕಾರಿಗಳಂತೆ ಇದು ಗಂಭೀರವಾಗಿ ನಡೆಯುವುದರಿಂದ ಇದಕ್ಕೆ ಈ ಹೆಸರು ಬಂತು. 
	
ಕೊಕ್ಕು ಗಟ್ಟಿಯಾಗಿ ಬೋಳಾಗಿದೆ. ತಲೆಯನ್ನು ಎಳೆಗೂದಲು ಆವರಿಸಿದೆ. ಗರಿಗಳು ಬಿರುಸಾಗಿವೆ; ನಾಜೂಕಾಗಿಲ್ಲ.  ಕಾಲುಗಳು ಉದ್ದ, ಬಲವುಳ್ಳವು; ಅವುಗಳ ಮೇಲೆ ಯಾವ ಹೊದ್ದಿಕೆಯೂ ಇಲ್ಲ. ರೆಕ್ಕೆ ಹರವಾಗಿದೆ.  ಮನುಷ್ಯರ ವಾಸಸ್ಥಾನಗಳಿಗೆ ಈ ಹಕ್ಕಿ ಹೊಂದಿಕೊಂಡಿದೆ ಮತ್ತು ಹೊಲಸನ್ನು ನಿರ್ಮೂಲ ಮಾಡುವುದರಲ್ಲಿ ಒಳ್ಳೆಯ ಪಾತ್ರವಹಿಸುತ್ತದೆ.  ಹಾವುಗಳನ್ನು ತಿನ್ನುತ್ತದಾದರೂ ಹೆಚ್ಚಾಗಿ ಹೆಣಗಳೇ ಇದರ ಆಹಾರ. ಅಲುಗಾಡದೆ ಬೆನ್ನಿಗೆ ಕೊರಳನ್ನು ಚಾಚಿಕೊಂಡು ದೀರ್ಘಕಾಲ ನಿಲ್ಲಬಲ್ಲದು.  ಓಡಾಟಗಳೆಲ್ಲ ಹಗಲಿನಲ್ಲೇ.  ಉತ್ತರ  ಭಾಗದಲ್ಲಿರುವುವು ಪಯಣಿಗ ಹಕ್ಕಿಗಳು.  ಇಂಡಿಯಾಕ್ಕೆ ಬೇಸಿಗೆಯಲ್ಲಿ ಬರುತ್ತವೆ; ಬೇಸಿಗೆ ಮುಗಿವ ಹೊತ್ತಿಗೆ ಬಂಗಾಳದಲ್ಲಿ ಸಾಧಾರಣವಾಗಿ ಕಾಣಿಸಿಕೊಳ್ಳುತ್ತವೆ. ಇವನ್ನು ಕೊಲ್ಲಬಾರದೆಂದು ಭಾರತ ಸರ್ಕಾರ ಕಾಯಿದೆ ಮಾಡಿದೆ.  
	
ಸಾಮಾನ್ಯವಾಗಿ ಇವು ದೊಡ್ಡ ದೊಡ್ಡ ಹಿಂಡುಗಳಲ್ಲಿ ಕಾಣಿಸಿಕೊಳ್ಳುತ್ತವೆ.  ಹಾರಾಟ ಅಷ್ಟು ಹಗುರವಲ್ಲ, ರೆಕ್ಕೆಗಳ ಬಡಿತ ಹೆಚ್ಚು; ಆದರೂ ವೇಗವಾಗೂ ತುಂಬ ಎತ್ತರಕ್ಕೂ ಹಾರಬಲ್ಲವು.  ಆಫ್ರಿಕದ ಜಾತಿಯ ಹಕ್ಕಿಯ ತಲೆ ಮಾಂಸದಂತೆ ಕೆಂಪಾಗಿದೆ; ಬೆನ್ನಿನ ತುಪ್ಪಳದ ಬಣ್ಣ ಲೋಹದ ಕಪ್ಪು ಹಸಿರು, ಕೊರಳು ಮತ್ತು ಕೆಳಭಾಗ ಬಿಳಿ.
(ಎಂ.ವಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ